ಪೋಕಾಯೋಕೆ

ಪೋಕಾಯೋಕೆ (ポカヨケ?) [poka yoke] ಅನ್ನುವುದು ಒಂದು ಜಪಾನಿ ಭಾಷೆಯ ಪದ. 'ತಪ್ಪಾಗದಂತೆ ತಡೆಯುವ' (mistake-proofing) ಎಂದು ಇದರ ಅರ್ಥ. ಯಾವುದೇ ಉತ್ಪಾದನಾ ಕೆಲಸದಲ್ಲಿ ಉಪಕರಣಗಳನ್ನು ಚಲಾಯಿಸುವವನು ಏನೂ ತಪ್ಪೆಸಗದಂತೆ ತಡೆಯುವ ತಂತ್ರ (ಮೆಕ್ಯಾನಿಸಂ) ಇದಾಗಿದೆ. ಮಾನವ ತಪ್ಪುಗಳನ್ನು ತಡೆಯುವ, ಸರಿಪಡಿಸುವ ಹಾಗೂ ಎಚ್ಚರಿಸುವ ಮೂಲಕ ಉತ್ಪನ್ನದ ದೋಷಗಳನ್ನು ನಿವಾರಿಸುವುದೇ ಇದರ ಉದ್ದೇಶ. ಈ ತಂತ್ರವು ಔಪಚಾರಿಕಗೊಳಿಸಲ್ಪಟ್ಟು ಟೊಯೊಟಾ ಪ್ರೊಡಕ್ಷನ್ ಸಿಸ್ಟಮ್ ನಲ್ಲಿ ಶಿಜಿಯೊ ಶಿಂಗೋ ಎನ್ನುವವರಿಂದ ಅಳವಡಿಸಲ್ಪಟ್ಟಿತು.[೧][೨] ಮೊದಲು ಇದು ಬಕಾಯೋಕೆ (ಅರ್ಥ: fool proofing, ಮೂರ್ಖತನ ತಡೆಯುವ) ಎಂದು ಹೇಳಲಾಗುತ್ತಿತ್ತು. ಅನಂತರ ಇದರ ಹೆಸರನ್ನು ತೀಕ್ಷ್ಣವಲ್ಲದ ಪದವಾದ 'ಪೋಕಾಯೋಕೆ' ಎಂದು ಹೆಸರಿಸಲಾಯಿತು.

ಬಳಕೆ

ಪೋಕಾಯೋಕೆ ಉದಾಹರಣೆ: ಎತರ್ನೆಟ್ ಕೇಬಲ್ ಪ್ಲಗ್-ಇದನ್ನು ಒಂದು ಸರಿಯಾದ ರೀತಿಯಲ್ಲಿ ಮಾತ್ರ ಹಾಕಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ

ಮೊದಲು ಉತ್ಪಾದನೆಯ ಕ್ಷೇತ್ರದಲ್ಲಿ ಬಳಕೆಯಾಗುತ್ತಿದ್ದ ಪೋಕಾಯೋಕೆ ವಿಧಾನವು ಈಗ ಸಾಮಾನ್ಯ ಬಳಕೆಯಲ್ಲೂ ಕೂಡ ಹಾಸುಹೊಕ್ಕಾಗಿದೆ. ಹಾಗಾಗಿ ಒಂದು ಪ್ರಕ್ರಿಯೆಯಲ್ಲಿ, ಕೆಲಸಗಾರನಿಂದ ಅಥವಾ ಬಳಕೆದಾರನಿಂದ ಯಾವುದೇ ತಪ್ಪುಗಳಾದಂತೆ ತಡೆಯುವ ವಿಧಾನವೇ ಪೋಕಾಯೋಕೆ ಎಂದು ವಿಶಾಲಾರ್ಥದಲ್ಲಿ ಹೇಳಬಹುದು.

ಒಂದು ಸರಳ ಉದಾಹರಣೆಯೆಂದರೆ, ಮ್ಯಾನುವಲ್ ಗೇರ್ ಹೊಂದಿರುವಂತಹ ಕಾರ್ ಒಂದನ್ನು ಸ್ಟಾರ್ಟ್ ಮಾಡುವುದಕ್ಕಿಂತ ಮುಂಚೆ ಚಾಲಕ ಕ್ಲಚ್ ಒತ್ತಬೇಕಾದಂತಹ ಪ್ರಕ್ರಿಯೆ. ಇದರಲ್ಲಿ ಕ್ಲಚ್ ಪೆಡಲ್ ಒತ್ತದಿದ್ದಲ್ಲಿ ಕಾರ್ ಸ್ಟಾರ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಅಂದರೆ ಇದು ಆ ಪ್ರಕ್ರಿಯೆಯಲ್ಲಿ ತಪ್ಪು ಆಗುವುದನ್ನು ತಡೆಯುತ್ತದೆ. ಹಾಗಾಗಿ ಈ ಪ್ರಕ್ರಿಯೆಯ ಹಂತ ಪೋಕಾಯೋಕೆ ಅನ್ನಿಸಿಕೊಳ್ಳುತ್ತದೆ. ಈ ವ್ಯವಸ್ಥೆಯು ಕಾರಿನ ಅನಪೇಕ್ಷಿತ ಚಲನೆಯನ್ನು ತಡೆಗಟ್ಟುತ್ತದೆ. ಮತ್ತೊಂದು ಉದಾಹರಣೆಯೆಂದರೆ, ಸ್ವಯಂಚಾಲಿತ ಟ್ರಾನ್ಸ್ ಮಿಶನ್ ಹೊಂದಿರುವ ಕಾರು. ಇದರಲ್ಲಿ ಒಂದು ಸ್ವಿಚ್ ಇರುತ್ತದೆ. ಈ ಸ್ವಿಚ್ ‘ಪಾರ್ಕ್’ ಅಥವಾ ‘ನ್ಯೂಟ್ರಲ್’ ಇದ್ದಾಗ ಮಾತ್ರ ಕಾರನ್ನು ಸ್ಟಾರ್ಟ್ ಮಾಡಲು ಸಾಧ್ಯ. ಕೆಲವೊಂದು ಸ್ವಯಂಚಾಲಿತ ಟ್ರಾನ್ಸ್ ಮಿಶನ್ ಕಾರುಗಳಲ್ಲಿ ಸ್ಟಾರ್ಟ್ ಮಾಡುವುದಕ್ಕಿಂತ ಮೊದಲು ಬ್ರೇಕ್ ಪೆಡಲ್ ಕೂಡ ಒತ್ತಿಹಿಡಿದಿರಬೇಕಾಗುತ್ತದೆ. ಇಂತಹ ವ್ಯವಸ್ಥೆಗಳು ಪೋಕಾಯೊಕೆ ವಿಧಾನಗಳಾಗಿದ್ದು ತಪ್ಪುಗಳಾಗದಂತೆ ತಡೆದು ಕ್ರಮೇಣ ಬಳಕೆದಾರರಿಗೆ ಅಭ್ಯಾಸವಾಗುತ್ತವೆ.

ಇದೇ ರೀತಿ ಕಂಪ್ಯೂಟರ್ ಕೇಬಲ್ ಗಳನ್ನು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಮಾತ್ರ ಜೋಡಿಸಲು, ಅಳವಡಿಸಲು ಸಾಧ್ಯವಾಗುವ ರೀತಿಯಲ್ಲಿ ವಿನ್ಯಾಸ ಮಾಡುವುದು ಕೂಡ ಪೋಕಾಯೋಕೆ ತಂತ್ರವೇ ಆಗಿದೆ.

Other Languages
العربية: بوكا يوكي
català: Poka-Yoke
čeština: Poka-joke
Deutsch: Poka Yoke
English: Poka-yoke
español: Poka-yoke
eesti: Poka-yoke
euskara: Poka-yoke
français: Détrompeur
עברית: פוקה-יוקה
magyar: Pokajoke
italiano: Poka-yoke
日本語: ポカヨケ
한국어: 포카 요케
Nederlands: Poka yoke
polski: Poka-yoke
português: Poka-Yoke
svenska: Poka-yoke
Türkçe: Poka-Yoke
українська: Захист від дурня
中文: 防呆