ಕೈಗಾರಿಕಾ ಸಂಬಂಧಗಳು

ಕೈಗಾರಿಕೆಗಳ ಮಾಲೀಕರ ಸಂಘಗಳಿಗೂ ಕಾರ್ಮಿಕ ಸಂಘಗಳಿಗೂ ನಡುವಣ ಸಂಬಂಧಗಳು (ಇಂಡಸ್ಟ್ರಿಯಲ್ ರಿಲೇಷನ್ಸ್).ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಶೀಘ್ರ ಮತ್ತು ಸಮತೂಕದ ಕೈಗಾರಿಕಾಕರಣಕ್ಕೆ ಪ್ರಾಮುಖ್ಯ ಇರುವುದರಿಂದ, ಕೈಗಾರಿಕಾ ಸಂಬಂಧಗಳು ಕೇವಲ ಎರಡು ಪಕ್ಷಗಳಿಗೆ, ಅಂದರೆ ಒಡೆಯರಿಗೆ ಮತ್ತು ಕೆಲಸಗಾರರಿಗೆ, ಸೀಮಿತವಾಗಿಲ್ಲ. ಆಗಾಗ ಕೆಲಸಗಾರರು ಕಾರ್ಮಿಕ ಸಂಘಗಳನ್ನು ಕಟ್ಟಿ ಅವುಗಳ ಮೂಲಕ ಒಡೆಯರೊಡನೆ ತಮ್ಮ ಹಕ್ಕುಗಳಿಗೆ ಹೋರಾಡುವುದಲ್ಲದೆ ಸರ್ಕಾರ ಕೂಡ ಕಾರ್ಮಿಕ ಕಾನೂನು ಮತ್ತು ಕಾರ್ಮಿಕ ಆಡಳಿತಗಳ ಮೂಲಕ ಕೈಗಾರಿಕಾ ಸಂಬಂಧಗಳಲ್ಲಿ ನೇರವಾಗಿ ಪ್ರವೇಶಿಸುತ್ತದೆ. ಇದೂ ಅಲ್ಲದೆ ಸರ್ಕಾರ ಸಾರ್ವಜನಿಕ ಕ್ಷೇತ್ರದಲ್ಲಿ ತಾನೇ ಮಾಲೀಕನಾಗಿದ್ದು ಕೈಗಾರಿಕಾ ಸಂಬಂಧಗಳಲ್ಲಿ ಇಟ್ಟಿಗೆಯ ಪಾತ್ರ ವಹಿಸುತ್ತದೆ.[೧]