ಅಲ್ಪಸಿಲಿಕಾಂಶ ಶಿಲೆಗಳು

ಇವುಗಳ ರಾಸಾಯನಿಕ ಸಂಯೋಜನೆಯಲ್ಲಿ ಸಿಲಿಕಾಂಶ ಶೇ.55ಕ್ಕೂ ಕಡಿಮೆ ಇರುವ ಶಿಲೆಗಳು (ಬೇಸಿಕ್ ಅಥವಾ ಮ್ಯಾಫಿಕ್ ಶಿಲೆಗಳು). ಸಿಲಿಕ ಪ್ರತ್ಯೇಕ ಖನಿಜವಾಗಿ ಕಂಡುಬರುವುದೇ ಅಪುರ್ವ. ಅಲ್ಲದೆ ಇತರ ಖನಿಜಗಳೊಡನೆ ರಾಸಾಯನಿಕವಾಗಿ ಸಂಯೋಜಿತವಾಗಿದ್ದರೂ ಅದರ ಪ್ರಮಾಣ ಅಷ್ಟು ಹೆಚ್ಚಲ್ಲ. ಒಟ್ಟಿನಲ್ಲಿ ಶಿಲೆಯ ಸಂಯೋಜನೆಯಲ್ಲಿ ಅದರ ಪಾತ್ರ ಗೌಣ. ಈ ಶಿಲೆಗಳಲ್ಲಿ ಕಪ್ಪು ಛಾಯೆಯ ಮೈಕ, ಹಾರ್ನ್‌ಬ್ಲೆಂಡ್ ಮತ್ತು ಪೈರಾಕ್ಸೀನ್ ಖನಿಜಗಳೇ ಅಧಿಕ ಪ್ರಮಾಣದಲ್ಲಿರುವುದರಿಂದ ಅವುಗಳ ಬಣ್ಣವೂ ಕಪ್ಪು.

ಇವು ಅಂತಸ್ಸರಣ (ಇನ್ಟ್ರೂಷನ್) ಮತ್ತು ಬಹಿಸ್ಸರಣ (ಎಕ್ಸ್‌ಟ್ರೂಷನ್) - ಈ ಎರಡೂ ವರ್ಗಗಳಲ್ಲಿ ಕಂಡುಬರುತ್ತವೆ.

ಅಂತಸ್ಸರಣ ವರ್ಗದ ಪ್ರಮುಖ ಶಿಲೆಗಳನ್ನು ಪುನಃ ಅಂತರಾಳ (ಪ್ಲುಟೋನಿಕ್) ಉಪವರ್ಗದವು ಮತ್ತು ಮಧ್ಯಾಂತರಾಳ (ಹೈಪಬಿಸ್ಸಲ್) ಉಪವರ್ಗದವು ಎಂದು ವಿಭಜಿಸಲಾಗಿದೆ. ಮೊದಲನೆಯ ಉಪವರ್ಗದ ಮುಖ್ಯ ಶಿಲೆಗಳು ಗ್ಯಾಬ್ರೊ ಗುಂಪಿನವು. ಇವು ಬಹುಮಟ್ಟಿಗೆ ಲ್ಯಾಕೊಲಿತ್, ಲೋಪೊಲಿತ್, ಬ್ಯಾಕೊಲಿತ್ ಮತ್ತು ಶಿಲಾಹಾಳೆಗಳು- ಈ ವಿವಿಧ ಹೊರ ಆಕಾರಗಳನ್ನು ತಳೆದಿವೆ. ಎರಡನೆಯ ಉಪವರ್ಗಕ್ಕೆ ಸೇರಿದ ಡಾಲರೈಟ್‌ಗಳು ಮುಖ್ಯವಾಗಿ ಡೈ ಅಥವಾ ಶಿಲಾಒಡ್ಡುಗಳಾಗಿಯೂ, ಅಪುರ್ವವಾಗಿ ಸಿಲ್ಗಳಂತೆಯೂ ಕಂಡುಬರುತ್ತವೆ. ಬಹಿಸ್ಸರಣವರ್ಗದ ಪ್ರಮುಖ ಶಿಲೆಗಳು ಬೆಸಾಲ್ಟ್‌ ಗುಂಪಿನವು. ಇವು ಭೂಮಿಯ ಮೇಲೆ ಲಾವಾಪ್ರಸ್ತರಗಳಾಗಿ ಕಂಡುಬರುತ್ತವೆ.ಈ ಎರಡು ವರ್ಗಗಳ ಶಿಲೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸೋಣ. ಗ್ಯಾಬ್ರೊ ಗುಂಪಿನ ಶಿಲೆಗಳು ಬಣ್ಣದಲ್ಲಿ ಕಪ್ಪು. ಸಮಕಣರಚನೆಯನ್ನು ತಳೆದಿವೆ. ಖನಿಜಕಣಗಳು ಸಾಮಾನ್ಯವಾಗಿ ದಪ್ಪನಾಗಿದ್ದು ಒಂದೇ ಗಾತ್ರವನ್ನು ಹೊಂದಿರುತ್ತವೆ. ಇವುಗಳಲ್ಲಿ ಮುಖ್ಯವಾದುವು ಗ್ಯಾಬ್ರೊ, ಆಲಿವೀನ್ ಗ್ಯಾಬ್ರೊ ನೋರೈಟ್, ಟ್ರಾಕ್ಟೊಲೈಟ್ ಮತ್ತು ಅನಾರ್ಥಸೈಟ್. ಈ ಪ್ರಭೇದಗಳು ಖನಿಜ ಸಂಯೋಜನೆಯನ್ನು ಅನುಸರಿಸಿವೆ. ಅವುಗಳ ವಿನ್ಯಾಸ ಮತ್ತು ರಾಸಾಯನಿಕ ಸಂಯೋಜನೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ.

ಗ್ಯಾಬ್ರೊ ಮುಖ್ಯವಾಗಿ ಪ್ಲೇಜೆಯೊಕ್ಲೇಸ್ ಮತ್ತು ಆಗೈಟ್ ಖನಿಜಗಳಿಂದ ಕೂಡಿದೆ. ಆಲಿವೀನ್ ಗ್ಯಾಬ್ರೊವಿನಲ್ಲಿ ಈ ಖನಿಜಗಳೇ ಪ್ರಧಾನವಾಗಿದ್ದು ಅಲ್ಪಸ್ವಲ್ಪ ಪ್ರಮಾಣದಲ್ಲಿ ಆಲಿವೀನ್ ಸಹ ಇರುತ್ತದೆ. ನೋರೈಟ್ನಲ್ಲಿ ಪ್ಲೇಜಿಯೊಕ್ಲೇಸ್ ಜತೆಗೆ ಎನ್ಸ್ಟಟೈಟ್, ಬ್ರಾನ್ಜೈಟ್ ಅಥವಾ ಹೈಪರ್ಸ್ತೀನ್ ಪ್ರಧಾನವಾಗಿ ಕಂಡುಬರುತ್ತವೆ. ಟ್ರಾಕ್ಟೊಲೈಟ್ನಲ್ಲಿ ಪ್ರಮುಖವಾಗಿ ಪ್ಲೇಜಿಯೊಕ್ಲೇಸ್ ಮತ್ತು ಆಲಿವೀನ್ ಖನಿಜಗಳನ್ನು ಕಾಣಬಹುದು. ಅನಾರ್ಥಸೈಟ್ನಲ್ಲಿ ಶಿಲೆಯ ಮುಕ್ಕಾಲುಭಾಗ ತಿಳಿಛಾಯೆಯ ಪ್ಲೇಜಿಯೊಕ್ಲೇಸ್ ಗುಂಪಿನ ವಿವಿಧ ಫೆಲ್ಡ್‌ಸ್ಟಾರ್‌ಗಳಿಂದಾದುದು. ಇವಲ್ಲದೆ ಹಲವು ಬಾರಿ ಕ್ವಾರ್ಟ್ಸ್‌ಗ್ಯಾಬ್ರೊ ಎಂಬ ವಿಶೇಷ ಪ್ರಬೇಧಗಳನ್ನೂ ಗುರುತಿಸಬಹುದು. ಖನಿಜ ಸಂಯೋಜನೆಯಲ್ಲಿ ಇದು ಸಾಮಾನ್ಯ ಗ್ಯಾಬ್ರೊವಿನಂತಿದ್ದು ಬಹು ಅಲ್ಪ ಪ್ರಮಾಣದಲ್ಲಿ ಕ್ವಾರ್ಟ್ಸ್‌ ಇರುತ್ತದೆ.

ಗ್ಯಾಬ್ರೋ, ಆಲಿವೀನ್ ಗ್ಯಾಬ್ರೊ, ನೋರೈಟ್ ಮತ್ತು ಟ್ರಾಕ್ಟೊಲೈಟ್‌ಗಳು ಬಹುಮಟ್ಟಿಗೆ ಬ್ರಿಟನ್ನಿನ ಕಾರ್ನ್ವಾಲ್, ಅಬರ್ಡೀನ್ಷೈರ್ ಮತ್ತು ಸ್ಕಾಟ್ಲೆಂಡಿನ ಪಶ್ಚಿಮ ದ್ವೀಪಗಳಲ್ಲಿ ಹರಡಿವೆ. ಕ್ವಾರ್ಟ್ಸ್‌ಗ್ಯಾಬ್ರೊಡೈಕ್ ಮತ್ತು ಸಿಲ್ಲುಗಳೋಪಾದಿಯಲ್ಲಿ ಬ್ರಿಟನ್, ಪೂರ್ವ ಅಮೆರಿಕ, ಗಯಾನ, ದಕ್ಷಿಣ ಆಫ್ರಿಕ ಮತ್ತು ಪಶ್ಚಿಮ ಆಸ್ಟ್ರೇಲಿಯಗಳಲ್ಲಿ ಕಂಡುಬಂದಿವೆ. ಬಹು ಪ್ರಸಿದ್ಧವಾದ ಅಮೆರಿಕದ ಸಡ್ಬರಿ ಮತ್ತು ಡುಲುಪ್ ಬೃಹತ್ ಲೋಪೊಲಿತ್ಗಳ ಬಹುಭಾಗ ಈ ಶಿಲೆಯಿಂದ ಕೂಡಿದೆ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕದ ಬುಷ್ವೆಲ್ಡ್‌ ಲೋಪೊಲಿತ್ ಅನ್ನೂ ಹೆಸರಿಸಬಹುದು. ಅನಾರ್ಥಸೈಟ್ ಕೆನಡ, ನ್ಯೂಯಾರ್ಕ್ ಬಳಿಯ ಅಡಿರೋಂಡಾಕ್ಸ್‌ ಮತ್ತು ಸ್ಕ್ಯಾಂಡಿನೇವಿಗಳಲ್ಲಿ ಬ್ಯಾತೊಲಿತ್ಗಳಾಗಿ ಕಂಡುಬರುತ್ತವೆ. ನಮ್ಮ ದೇಶದ ತಮಿಳುನಾಡಿನ ಸಿತ್ತಂಪುಂಡಿ, ಬಿಹಾರ್, ಒರಿಸ್ಸ ಮತ್ತು ಪಶ್ಚಿಮ ಬಂಗಾಲದ ಹಲವಾರು ಪ್ರದೇಶಗಳಲ್ಲಿ ಈ ಶಿಲೆಯನ್ನು ಕಾಣಬಹುದು.

ಡಾಲರೈಟ್‌ಗಳು ಪ್ರಪಂಚದ ಅನೇಕ ಕಡೆ ಡೈಕ್ ಸಮೂಹಗಳಾಗಿ ಕಂಡುಬಂದಿವೆ. ಪ್ರತಿ ಸಮೂಹದಲ್ಲಿ ಒಂದೇ ಹರವುಳ್ಳ ನೂರಾರು ಡೈಕುಗಳನ್ನು ಗುರುತಿಸಲು ಸಾಧ್ಯ. ಒಂಟಿ ಡೈಕುಗಳು ಅಪೂರ್ವ. ಹಲವು ಪ್ರದೇಶಗಳಲ್ಲಿ ಈ ಶಿಲೆ ಸಿಲ್ ಆಕಾರವನೂ ತಳೆದಿದೆ. ಇವು ಸಹ ಬಣ್ಣದಲ್ಲಿ ಕಪ್ಪು. ಸಾಮಾನ್ಯವಾಗಿ ಪ್ಲೇಜಿಯೊಕ್ಲೇಸ್ ಮತ್ತು ಆಗೈಟ್ ಖನಿಜಗಳಿಂದಾಗಿದೆ. ಹಲವು ವೇಳೆ ಆಲಿವೀನ್ ಹೈಪರ್ಸ್ತೀನ್ ಮತ್ತು ಕ್ವಾರ್ಟ್ಸ್‌ಗಳನ್ನು ಅಲ್ಪಪ್ರಮಾಣದಲ್ಲಿ ಗುರುತಿಸಬಹುದು. ಇವುಗಳ ಇರುವಿಕೆಗನುಗುಣವಾಗಿ ಆಲಿವೀನ್ ಡಾಲರೈಟ್, ಹೈಪರ್ಸ್ತೀನ್ ಡಾಲರೈಟ್ ಮತ್ತು ಕ್ವಾರ್ಟ್ಸ್‌ ಡಾಲರೈಟ್ ಎಂಬ ವಿಶೇಷ ಬಗೆಗಳೂ ಉಂಟು. ಖನಿಜ ಮತ್ತು ರಾಸಾಯನಿಕ ಸಂಯೋಜನೆಗಳಲ್ಲಿ ಇವುಗಳಿಗೂ ಗ್ಯಾಬ್ರೊಗಳಿಗೂ ಹೆಚ್ಚಿನ ವ್ಯತ್ಯಾಸಗಳಿರು ವುದಿಲ್ಲ. ಆದರೆ ರಚನೆ ಅಥವಾ ವಿನ್ಯಾಸದಲ್ಲಿ ಪರಸ್ಪರ ಹೋಲಿಕೆಯಿಲ್ಲ. ಇದು ಒಂದು ವಿಶೇಷ ರೀತಿಯ ಹೆಣಿಗೆ ರಚನೆಯನ್ನು ತೋರಿಸುತ್ತದೆ. ಮುಖ್ಯ ಖನಿಜಗಳಾದ ಪ್ಲೇಜಿಯೊಕ್ಲೇಸ್ ಮತ್ತು ಆಗೈಟ್ ಒಂದರೊಡನೊಂದು ಹೆಣೆದುಕೊಂಡಿರುತ್ತವೆ. ಇದನ್ನು ಡಾಲರಿಟಿಕ್ ಅಥವಾ ಓಫಿಟಿಕ್ ವಿನ್ಯಾಸವೆನ್ನಲಾಗಿದೆ. ನಮ್ಮ ಕರ್ನಾಟಕದಲ್ಲಿ ನೂರಾರು ಡಾಲರೈಟ್ ಡೈಕುಗಳನ್ನು ಗುರುತಿಸಲಾಗಿದೆ.ಇನ್ನು ಬಹಿಸ್ಸರಣ ವರ್ಗದ ಸಾಲ್ಟ್‌ ಶಿಲಾಗುಂಪು. ಇದರಲ್ಲಿಯೂ ಖನಿಜ ಸಂಯೋಜನೆಯನ್ನನುಸರಿಸಿ ಹಲವಾರು ಪ್ರಭೇದಗಳಿವೆ. ಇವು ಬಣ್ಣದಲ್ಲಿ ಕಪ್ಪು ಅಥವಾ ಬೂದುಮಿಶ್ರಿತ ಕಪ್ಪು. ಜ್ವಾಲಾಮುಖಜ ಶಿಲೆಯಾದ ಕಾರಣ ರಚನೆ ಅಸ್ಪಷ್ಟ. ಖನಿಜಕಣಗಳನ್ನು ಬರಿಗಣ್ಣಿನಿಂದ ಗುರುತಿಸಲು ಸಾಧ್ಯವಿಲ್ಲ. ಹಲವು ಬಾರಿ ನಾನಾ ಆಕಾರ ಮತ್ತು ಗಾತ್ರದ ಅನಿಲರಂಧ್ರಗಳಿರುವುದುಂಟು. ಇವು ಸಾಮಾನ್ಯವಾಗಿ ಸಿಲಿಕ, ಜಿûಯೊಲೈಟ್, ಎಪಿಡೋಟ್, ಕ್ಯಾಲ್ಸೈಟ್ ಮುಂತಾಗಿ ವಿವಿಧ ಆನುಷಂಗಿಕ ಖನಿಜಗಳಿಂದ ತುಂಬಿರುತ್ತವೆ.

ಆದರೆ ಸೂಕ್ಷ್ಮದರ್ಶಕದ ಮೂಲಕ ಶಿಲೆಯನ್ನು ಪರೀಕ್ಷಿಸಿದಾಗ ಒಂದು ಬಗೆಯ ವಿಶೇಷ ರಚನೆಯನ್ನು ಕಾಣಬಹುದು. ಇದನ್ನು ಬೆಸಾಲ್ಟಿಕ್ ವಿನ್ಯಾಸವೆಂದೂ ಕರೆಯುತ್ತಾರೆ. ಸೂಕ್ಷ್ಮಸೂಜಿಯಾಕಾರದ ಪ್ಲೇಜಿಯೊಕ್ಲೇಸ್ಗಳಿಂದುಂಟಾದ ಬಗೆಬಗೆಯ ಚೌಕಟ್ಟುಗಳ ನಡುವೆ ಆಗೈಟ್, ಆಲಿವೀನ್, ಮ್ಯಾಗ್ನಟೈಟ್ ಮುಂತಾದ ಖನಿಜಗಳ ಸೂಕ್ಷ್ಮಕಣಗಳು ಅಡಕವಾಗಿರುತ್ತವೆ. ಹಲವು ಸಂದರ್ಭಗಳಲ್ಲಿ ಪಾರ್ಫಿರಿಟಿಕ್ ಅಥವಾ ಅಸಮಕಣರಚನೆಯೂ ಕಂಡುಬರುವುದುಂಟು. ಸೂಕ್ಷ್ಮ ವಿನ್ಯಾಸದ ನಡುವೆ ಅಲ್ಲಲ್ಲಿ ದೊಡ್ಡ ದೊಡ್ಡ ಖನಿಜದ ಹರಳುಗಳು ತೋರಿಬರುತ್ತವೆ. ಇವೇ ಪಾರ್ಫಿರಿಟಿಕ್ ಬೆಸಾಲ್ಟ್‌ಗಳು.

ಬೆಸಾಲ್ಟ್‌ ಬಹುಮಟ್ಟಿಗೆ ಪ್ಲೇಜಿಯೊಕ್ಲೇಸ್ ಮತ್ತು ಆಗೈಟ್ಗಳನ್ನು ಪ್ರಧಾನ ಖನಿಜಗಳಾಗಿ ಹೊಂದಿರುತ್ತದೆ. ಹಲವು ಸಂದರ್ಭಗಳಲ್ಲಿ ಆಲಿವೀನ್ ಅಥವಾ ಕ್ವಾರ್ಟ್ಸ್‌ ಸಹ ಅಲ್ಪಪ್ರಮಾಣ ದಲ್ಲಿರಬಹುದು. ಇವನ್ನು ಕ್ರಮವಾಗಿ ಆಲಿವೀನ್ ಬೆಸಾಲ್ಟ್‌ ಅಥವಾ ಕ್ವಾರ್ಟ್ಸ್‌ ಬೆಸಾಲ್ಟ್‌ ಎಂದು ಹೆಸರಿಸಲಾಗಿದೆ.

ಬೆಸಾಲ್ಟ್‌ ಗುಂಪಿನ ಶಿಲೆಗಳು ದಕ್ಷಿಣ ಅಮೆರಿಕದ ಪರಾನಾ, ಬ್ರಿಟನ್ನಿನ ಉತ್ತರ ಭಾಗ, ಐಸ್ಲೆಂಡ್ ಮತ್ತು ಗ್ರೀನ್ಲೆಂಡ್ ಜಾಡು ಮತ್ತು ಭಾರತದ ದಖನ್ಪ್ರಸ್ಥಭೂಮಿಯಲ್ಲಿ ಪ್ರಮುಖವಾಗಿ ಕಂಡುಬಂದಿವೆ. ಇಲ್ಲೆಲ್ಲ ಇವು ಸಹಸ್ರಾರು ಚ. ಮೈ. ವಿಸ್ತೀರ್ಣವನ್ನಾಕ್ರಮಿಸಿವೆ. ನಮ್ಮ ದೇಶದಲ್ಲಿ ಇವುಗಳ ವ್ಯಾಪ್ತಿ ಸು. 4,82,700ಚ.ಕಿಮೀ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
Other Languages
Afrikaans: Mafies
العربية: صخر مافي
български: Мафичен
català: Màfic
čeština: Mafity
English: Mafic
español: Máfico
euskara: Mafiko
فارسی: مافیک
suomi: Mafinen
français: Mafique
עברית: מאפי
Bahasa Indonesia: Mafik
íslenska: Basísk kvika
italiano: Femico
日本語: 苦鉄質
ქართული: ფუძე ქანები
Nederlands: Mafisch
norsk nynorsk: Mafiske mineral
português: Máfico
Simple English: Mafic
slovenčina: Mafický
slovenščina: Mafičnost
српски / srpski: Мафичност
Türkçe: Mafik
Tiếng Việt: Mafic
吴语: 铁镁质
中文: 铁镁质